ಏಕಾಂತದ ರಾಮಯ್ಯ: 	ಕನ್ನಡ ನಾಡಿನಲ್ಲಿ ಶೈವನಿಷ್ಠೆಯ ಮೇಲ್ಮೆಯನ್ನು ಪ್ರಸ್ಥಾಪಿಸಿದ ವೀರ ಶಿವಭಕ್ತರಲ್ಲಿ ಗಣ್ಯ. ಕಾಲ 12ನೆಯ ಶತಮಾನದ ಉತ್ತರಾರ್ಧ. ಸೋಮನಾಥನ ಗಣಸಹಸ್ರನಾಮಾವಳಿಯಲ್ಲಿ ಇವನ ಹೆಸರಿದೆ. ಈತ ತನ್ನ ಪವಾಡಗಳನ್ನು ಮೆರೆದ ಸ್ಥಳ ಅಬ್ಬಲೂರು. ಅಲ್ಲಿನ ಶಿಲಾಶಾಸನವೊಂದರಲ್ಲಿ ಇವನ ಬಗ್ಗೆ ಉಲ್ಲೇಖವಿದೆ, ಹರಿಹರ ಇವನನ್ನು ಕುರಿತು ಒಂದು ರಗಳೆಯನ್ನು ಬರೆದಿದ್ದಾನೆ. 

ಈತನ ಊರು ಅಲಂದೆನಗರ ಅಂದರೆ ಗುಲ್ಬರ್ಗ ಜಿಲ್ಲೆಯಲ್ಲಿ ಅಳಂದ ಎಂಬ ಗ್ರಾಮ. ಶ್ರೀವತ್ಸಗೋತ್ರದ ಪುರುಷೋತ್ತಮ, ಪದ್ಮಾಂಬಿಕೆ ಎಂಬ ಬ್ರಾಹ್ಮಣ ದಂಪತಿಗಳಲ್ಲಿ ವೀರಭದ್ರನ ವರಪ್ರಸಾದದಿಂದ ಜನಿಸಿದ. ಹೆಸರು ರಾಮ, ಅಲಂದೆಯ ಸೋಮನಾಥ ಶಿವನನ್ನು ಏಕಾಂತದಲ್ಲಿ ಏಕಾಗ್ರ ಭಕ್ತಿಯಿಂದ ಆರಾಧಿಸಿ, ಮೆಚ್ಚಿಸಿದುದರಿಂದಾಗಿ ಈತನಿಗೆ ಏಕಾಂತದ ರಾಮಯ್ಯ ಎಂಬ ಅರ್ಥಪುರ್ಣ ಹೆಸರು ಬಂತು. ರಾಮಯ್ಯ ಶೈವ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತ ಹುಲಿಗೆರೆಗೆ (ಇಂದಿನ ಲಕ್ಷ್ಮೇಶ್ವರ) ಬಂದು, ಅಲ್ಲಿಯ ದಕ್ಷಿಣ ಸೋಮನಾಥನನ್ನು ಪುಜಿಸಿದ. ಈ ದೇವನ ಆದೇಶದಂತೆ ಜೈನಕೇಂದ್ರವಾಗಿದ್ದ ಅಬ್ಬಲೂರಿಗೆ ಆಗಮಿಸಿದ.

ರಾಮಯ್ಯ ಅಬ್ಬಲೂರಿನ ಬ್ರಹ್ಮೇಶ್ವರ ದೇವಾಲಯದಲ್ಲಿ ನಿರ್ಭಯವೃತ್ತಿಯಿಂದ ವಾಸವಾಗಿರಲು, ಆ ಪುರದ ಪ್ರಮುಖ ಗಾವುಂಡನೇ ಮೊದಲಾದ ಜೈನಧರ್ಮೀಯರು ಅಲ್ಲಿಗೆ ಬಂದು ಜಿನನೇ ಶ್ರೇಷ್ಠನೆಂದು ವಾದಹೂಡಿ ಆತಂಕ ಮಾಡಿದರು. ಶಿವನೇ ಶ್ರೇಷ್ಠ ನೆಂದು  ಪ್ರತಿಪಾದಿಸಿದ ರಾಮಯ್ಯನನ್ನು ಪ್ರತಿಭಟಿಸಿದರು. ಶಿವನೇ ಶ್ರೇಷ್ಠನೆಂದು ಪ್ರಸ್ಥಾಪಿಸಲು ತನ್ನ ಶಿರವನ್ನು ಕೊಯ್ದು ಅದನ್ನು ಪುನಃ ಪಡೆಯುವಂತೆ ಆತನಿಗೆ ಆಹ್ವಾನವಿತ್ತರು.

ಈ ಆಹ್ವಾನವನ್ನು ಅಂಗೀಕರಿಸಿ ತನ್ನ ಶಿರವನ್ನು ಕೊಯ್ದು ರಾಮಯ್ಯ ಶಿವಪಾದದಲ್ಲಿ ಅರ್ಪಿಸಿದ. ಅದು ಏಳು ದಿನ ಅಲ್ಲಿ ಉಳಿದುಕೊಂಡು, ಬಳಿಕ ತನ್ನ ಸ್ಥಳಕ್ಕೆ ಸೇರಿಕೊಂಡಿತು. ಈ ಅದ್ಭುತವನ್ನು ಕಂಡ ಜೈನರು ದಿಗ್ಭ್ರಾಂತರಾದರು. ರಾಮಯ್ಯ ತನ್ನ ಪ್ರತಿಜ್ಞೆಯಂತೆ ಜಿನನನ್ನು ಧ್ವಂಸಮಾಡಲು ಮುಂದುವರಿದ. ಆತನನ್ನು ವಿರೋಧಿಸಿದ ಜೈನರೆಲ್ಲರೂ ಸೋತು ಶರಣಾಗತರಾಗಿ ರಾಮಯ್ಯನಿಗೆ ಜಯಪತ್ರವನ್ನು ಬರೆದುಕೊಟ್ಟು ಶೈವಧರ್ಮಾ ವಲಂಬಿಗಳಾದರು.

ಅನಂತರ ಜೈನರು ರಾಮಯ್ಯನ ವಿರುದ್ಧವಾಗಿ ಬಿಜ್ಜಳನಲ್ಲಿ ದೂರು ಸಲ್ಲಿಸಿದರು. ಬಿಜ್ಜಳ ರಾಮಯ್ಯನ ಪ್ರಭಾವವನ್ನು ಅರಿತವನಾಗಿ ಜೈನರ ದೂರನ್ನು ತಿರಸ್ಕರಿಸಿದ. ರಾಮಯ್ಯನನ್ನು ಸತ್ಕರಿಸಿದ್ದಲ್ಲದೆ ಅಬ್ಬಲೂರಿನ ವೀರ ಸೋಮನಾಥದೇವನಿಗೆ ಭೂದಾನ ಮಾಡಿದ. 

ರಾಮಯ್ಯನ ಕೀರ್ತಿಯನ್ನು ಕೇಳಿ ಬೇರೆ ರಾಜರು ಪ್ರಭಾವಿತರಾದರು. ಚಾಲುಕ್ಯ ನಾಲ್ಕನೆಯ ಸೋಮೇಶ್ವರ, ಕದಂಬ ಕಾಮದೇವರಿಂದ ಈತ ಸನ್ಮಾನಿತನಾದ. ಇದು ಶಾಸನದಲ್ಲಿರುವ ಸಂಗತಿ. ಈ ಶಾಸನ ವೃತ್ತಾಂತದ ಕೆಲವು ವಿವರಗಳು ಹರಿಹರನ ರಗಳೆಯಲ್ಲಿ ಸಿಕ್ಕುವುದಿಲ್ಲ. ಶಾಸನಗಳಲ್ಲಿರದ ಒಂದೆರಡು ಹೆಚ್ಚಿನ ಅಂಶಗಳು ಹೀಗಿವೆ :
ಹುಲಿಗೆರೆಯ ಅಗ್ಗಣಿಯ ಹೊನ್ನಿತಂದೆಯೆಂಬ ಶಿವಭಕ್ತ ಜೈನಪರಾಜಯ ಕಾರ್ಯದಲ್ಲಿ ರಾಮಯ್ಯನಿಗೆ ಸಹಾಯಕನಾದ. ರಾಮಯ್ಯನ ರುಂಡವನ್ನು ಪುಲಿಗೆರೆ, ಅಣ್ಣಿಗೆರೆ, ಕೆಂಬಾವಿ, ಕಪ್ಪಡಿಸಂಗಮ, ನಾಗನಾಥ, ಸೊನ್ನಲಿಗೆ, ಹಂಪೆ ಮೊದಲಾದ ಶೈವಕ್ಷೇತ್ರಗಳಲ್ಲಿ ಏಳು  ದಿನಗಳವರೆಗೆ ಮೆರೆಯಿಸಿದ.

ರಾಮಯ್ಯನ ಕಥೆ ತೆಲುಗು ಬಸವಪುರಾಣ, ಕನ್ನಡ ಬಸವಪುರಾಣ, ಮೊದಲಾದ ಈಚೆಯ ವೀರಶೈವ ಪುರಾಣಕಾವ್ಯಗಳಲ್ಲಿ ಪವಾಡಗಳಿಂದ ಕೂಡಿ ರಂಜಕವಾಗಿ ನಿರೂಪಿತವಾಗಿದೆ.
ರಾಮಯ್ಯ ಪ್ರತಿಷ್ಠೆಮಾಡಿದ ವೀರಸೋಮೇಶ್ವರ ದೇವಾಲಯ ಈಗಲೂ ಅಬ್ಬಲೂರಲ್ಲಿದೆ. ಈ ದೇವಾಲಯದ ಭಿತ್ತಿಗಳ ಮೇಲೆ ರಾಮಯ್ಯನ ಜಿನವಿಜಯದ ಸನ್ನಿವೇಶಗಳನ್ನು ಜೊತೆಯ ವಿವರಣೆಗಳೊಂದಿಗೆ ಚಿತ್ತಾಕರ್ಷಕವಾಗಿ ಕೆತ್ತಲಾಗಿದೆ. ಭೂಗತವಾಗಿದ್ದ ನೂರಾರು ಚಿಕ್ಕ ಶಿವಲಿಂಗಗಳು ಕೆಲವರ್ಷಗಳ ಹಿಂದೆ ಈ ಊರಲ್ಲಿ ದೊರೆತಿವೆ. ದೇವಾಲಯದಲ್ಲಿ ಸೋಮೇಶ್ವರ ಲಿಂಗವಲ್ಲದೆ ರಾಮಯ್ಯ, ಅಗ್ಗಣಿಯ ಹೊನ್ನಯ್ಯರ ಸ್ಮಾರಕಗಳಾದ ಎರಡು ಬೃಹತ್ ಲಿಂಗಗಳಿವೆ.	    (ಪಿ.ಬಿ.ಡಿ.; ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ